ಫಿನಾಮೆನಾಲಜಿ
ಈ ಶತಮಾನದ ಆರಂಭದಲ್ಲಿ ಹೊಸದಾಗಿ ರೂಪತಳೆದ ಒಂದು ದರ್ಶನ. ಪ್ರಕೃತಿಗೋಚರ ವಿಷಯಗಳು ಮಾತ್ರವೇ ಜ್ಞಾನ ವಿಷಯಗಳು ಎಂಬ ವಾದವನ್ನು ಮಂಡಿಸುವ ಈ ದರ್ಶನದ ಸ್ಥಾಪಕ ಮತ್ತು ಪ್ರತಿಪಾದಕ ಜರ್ಮನಿಯ ದಾರ್ಶನಿಕ ಎಡ್ಮಂಡ್ ಹುಸ್ರೆಲ್ (1859-1938). ಈ ದರ್ಶನವನ್ನು ಕುರಿತ ಈತನ ಗ್ರಂಥ ಇತ್ತೀಚೆಗೆ 1913ರಲ್ಲಿ ಆಂಗ್ಲಭಾಷೆಗೆ ಅನುವಾದಿಸಲಾಗಿದೆ. ಆದುದರಿಂದ ಈ ದರ್ಶನಕ್ಕೆ ಸಂಬಂಧಿಸಿದ ಸಾಹಿತ್ಯ ಆಂಗ್ಲಭಾಷೆಯಲ್ಲಿ ಸ್ವಲ್ಪ ವಿರಳ.

	ಹುಸ್ರೆಲ್‍ನ ಅಭಿಪ್ರಾಯದಲ್ಲಿ ಈ ದರ್ಶನ ಮಹತ್ತ್ವಪೂರಿತವಾದುದು. ಈತನ ಪ್ರಕಾರ ಆದರ ಮುಖ್ಯ ಗುರಿ ತತ್ತ್ವನಿರ್ಣಯವಲ್ಲ ತತ್ತ್ವನಿರೂಪಣೆಗೆ ಅಗತ್ಯವಾಗಿರುವ ಒಂದು ಮಾರ್ಗದ ನಿರೂಪಣೆ. ತತ್ತ್ವಶಾಸ್ತ್ರ ಫಿನಾಮೆನಾಲಜಿ ವಿಧಾನವನ್ನು ಅಳವಡಿಸಿಕೊಂಡಲ್ಲಿ ಆದು ಒಂದು ಶುದ್ಧ ವಿಜ್ಞಾನವಾಗುತ್ತದೆ ಎನ್ನುತ್ತಾನೆ. ಸಾಮಾನ್ಯವಾಗಿ ತತ್ತ್ವಶಾಸ್ತ್ರದ ನಿರೂಪಣೆಗೆ ಇಂದ್ರಿಯ ಗೋಚರವಾದ ಹೊರಗಿನ ಪ್ರಪಂಚದ ವಸ್ತುಗಳೂ ಒಳಪಟ್ಟಿರುತ್ತವೆ. ಈತನ ಪ್ರಕಾರ ಇದು ಸರಿಯಲ್ಲ. ತತ್ತ್ವಶಾಸ್ತ್ರದ ಅನ್ವೇಷಣೆ ಹೊರಮುಖವಾಗಿ ಹರಿಯಕೂಡದು; ಆದು ಅಂತರ್ಮುಖವಾಗಬೇಕು. ಎಂದರೆ ತತ್ತ್ವಶಾಸ್ತ್ರ ವಿಮರ್ಶಿಸಬೇಕಾದ ಕ್ಷೇತ್ರ ಮನುಷ್ಯನ ಅನುಭವ ಮತ್ತು ಆ ಅನುಭವದ ವಿಷಯಗಳಿಗೆ ಮಾತ್ರ ಸಂಬಂಧಿಸಿರಬೇಕು. ಅನುಭವಗ್ರಾಹ್ಯವಲ್ಲದ ಬಾಹ್ಯವಸ್ತುಗಳ ಪರಿಶೀಲನೆ ಇಲ್ಲಿ ಮಿಶ್ರವಾಗಕೂಡದು. ಈ ರೀತಿ ಬಾಹ್ಯವಸ್ತುಗಳನ್ನು ಅನ್ವೇಷಣಾ ವಿಷಯದಿಂದ ಬೇರ್ಪಡಿಸಿ ತನ್ನ ಸಂಶೋಧನೆಯನ್ನು ಕೇವಲ ಅನುಭವ ಮತ್ತು ತದ್ಗತ ವಿಷಯಗಳ ಮೇಲೆ ಮಾತ್ರ ಕೇಂದ್ರೀಕರಿಸುವ ದರ್ಶನವೇ ಹುಸ್ರೆಲ್‍ನ ಪ್ರಕಾರ ಶುದ್ಧವಾದ ದಾರ್ಶನಿಕ ಪಂಥ.

	ಫಿನಾಮೆನಾಲಜಿ ಅನುಭವ ಮತ್ತು ಆದರ ವಿಷಯಗಳನ್ನು ಸಂಶೋಧಿಸುತ್ತದೆಂದು ಹೇಳುವಾಗ ಒಂದು ಸಂಶಯ ಮೂಡುತ್ತದೆ. ಮನಶ್ಯಾಸ್ತ್ರವೂ ಅನುಭವಕ್ಕೆ ಆಧಾರವಾದ ಮನಸ್ಸಿಗೆ ಚಟುವಟಿಕೆಗಳನ್ನೇ ವಿವರಿಸುವುದರಿಂದ ಫಿನಾಮೆನಾಲಜಿಗೂ ಮನಶ್ಯಾಸ್ತ್ರಕ್ಕೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ ಎಂಬುದೇ ಆ ಸಂಶಯ. ಹುಸ್ರೆಲ್ ಈ ಸಂಶಯವನ್ನು ತೀವ್ರವಾಗಿ ಖಂಡಿಸುತ್ತಾನೆ. ಮನಶ್ಯಾಸ್ತ್ರದ ಎಲ್ಲೆ ಕೇವಲ ಮನಸ್ಸು ಮತ್ತು ಆದರ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಆದು ಮನಸ್ಸಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇರಬಹುದಾದ ಗುರಿ ಅಥವಾ ಉದ್ದೇಶವನ್ನು ಸಂಶೋಧಿಸಲೆತ್ನಿಸುವುದಿಲ್ಲ. ಆದರೆ ಪ್ರತಿಯೊಂದು ಅನುಭವಕ್ಕೂ ಒಂದು ಉದ್ದೇಶವಿದೆಯೆಂಬುದು ಹುಸ್ರೆಲ್‍ನ ವಾದ. ಅನುಭವದ ಹಿನ್ನೆಲೆಯಲ್ಲಿ ಇರಬಹುದಾದ ಈ ಗುರಿ ಅಥವಾ ಲಕ್ಷ್ಯವನ್ನೇ ಹುಸ್ರೆಲ್ ಪಾರಿಭಾಷಿಕವಾಗಿ ಇನ್‍ಟೆನ್ಷಾನ್ಯಾಲಿಟಿ ಎಂದು ಕರೆಯುವುದು. ಅನುಭವವಷ್ಟೇ ಅಲ್ಲದೆ ಆದರ ಲಕ್ಷ್ಯವನ್ನು ಶೋಧಿಸುವುದು ಈ ದರ್ಶನದ ಒಂದು ವೈಶಿಷ್ಟ್ಯ.

	ಅನುಭವದ ಈ ಲಕ್ಷ್ಯದಲ್ಲಿ ಇಂದ್ರಿಯಾನುಭವ ಮತ್ತು ಅನುಭೂತಿ ಎಂದು ಎರಡು ವಿಧವಿದೆ. ಮೊದಲನೆಯದು ಅನುಭವಿಕ ವಿಶೇಷಗಳನ್ನು ಕುರಿತದ್ದು; ಎರಡನೆಯದು ಮೂಲತತ್ತ್ವಗಳನ್ನು ಕುರಿತದ್ದು. ಈ ಎರಡು ರೀತಿಯ ಅನುಭವಗಳಲ್ಲಿ ಫಿನಾಮೆ ನಾಲಜಿ ಎರಡನೆಯ ವಿಧವಾದ ಅನುಭವದ ಮೇಲೆ ತನ್ನ ಶೋಧನೆಯನ್ನು ಕೇಂದ್ರೀಕರಿಸುತ್ತದೆ. ಇಂದ್ರಿಯಾನುಭವ ಮತ್ತು ಆದರ ವಿಷಯಗಳು ಫಿನಾಮೆನಾಲಜಿಯ ಶೋಧನೆಯಲ್ಲಿ ಅಂತರ್ಗತವಾಗುವುದಿಲ್ಲ. ಈ ರೀತಿಯ ಸಂಶೋಧನೆ ಎರಡು ವಿಧವಾದ ಶುದ್ಧಿಯನ್ನು ಸಾಧಿಸುತ್ತದೆ. ಒಂದು ಬಾಹ್ಯವಸ್ತುಗಳ ಬೇರ್ಪಡಿಕೆ; ಇನ್ನೊಂದು ಇಂದ್ರಿಯಗೋಚರ ವಿಷಯಗಳ ಬೇರ್ಪಡಿಕೆ. ಒಟ್ಟಿನಲ್ಲಿ ಫಿನಾಮೆನಾಲಜಿ ಶೋಧನೆಯ ಕ್ಷೇತ್ರ ಮನುಷ್ಯನ ಅನುಭೂತಿಗಳು ಮತ್ತು ಆ ಅನುಭೂತಿಯ ವಿಷಯವಾದ ಅಥವಾ ಆಂತರಿಕ ದೃಷ್ಟಿಗೆ ಗೋಚರವಾದ ಮೂಲತತ್ತ್ವಗಳಿಗೆ ಸೀಮಿತವಾಗಿದೆ.

	ಮೇಲಿನ ಅನುಭವಗಳಿಗೆಲ್ಲ ಆಶ್ರಯವಾದ ಒಂದು ವಸ್ತುವಿದೆ. ಅದು ಚಿದ್ವಸ್ತು. ಅದನ್ನು ಅಹಂತತ್ತ್ವ ಎಂದು ಕರೆಯುತ್ತಾರೆ. ಈ ಅಹಂತತ್ತ್ವದ ಆಶ್ರಯದಲ್ಲೇ ಈ ಎಲ್ಲ ಅನುಭವಗಳೂ ನಡೆಯುವುದು.

	ಪಾಶ್ಚಾತ್ಯರ ದೃಷ್ಟಿಕೋನದಿಂದ ನೋಡಿದಾಗ ಫಿನಾಮೆನಾಲಜಿ ಪಂಥದಲ್ಲಿ ಕೆಲತಾರ್ಕಿಕ ಅಂಶಗಳು ಕಾಣುತ್ತವೆ. 1 ಬಾಹ್ಯವಸ್ತುಗಳ ನೇರಗ್ರಹಣವೇ ಜ್ಞಾನವೆಂದು ಸಾರುವ ವಾಸ್ತವಿಕ ವಾದಕ್ಕೆ ಈ ದರ್ಶನದಲ್ಲಿ ಸ್ಥಾನವಿದ್ದಂತೆ ತೋರುವುದಿಲ್ಲ. 2 ಇಂದ್ರಿಯಗಳಿಗೆ ದೊರಕುವ ವಿಷಯಗಳನ್ನು ದೂರಮಾಡಿ ಕೇವಲ ವಸ್ತುಗಳ ಸಾರ ಅಥವಾ ಮೂಲತತ್ತ್ವಗಳೇ ಶೋಧನಾರ್ಹ ಎನ್ನುವುದು ಪ್ಲೇಟೋವಿನ ತಾತ್ತ್ವಿಕ ವಿಧಾನವನ್ನು ಹೋಲುತ್ತದೆ. 3 ಇಂದ್ರಿಯಾನುಭವದಿಂದ ತತ್ತ್ವನಿರ್ಣಯ ಅಸಾಧ್ಯವೆಂದು ಸಾರಿದ ಡೆಕಾರ್ಟ್, ಸ್ಪಿನೋeóÁ ಮತ್ತು ಲಿಬ್ನಿeóï ಮುಂತಾದ ವಿಚಾರವಾದಿಗಳ ವಿಚಾರ ಸರಣಿಯನ್ನು ಸ್ವೀಕರಿಸಿ, ಲಾಕ್, ಬಾಕ್ರ್ಲೆ ಮತ್ತು ಹ್ಯೂಮ್ ಅವರ ಅನುಭವಪಂಥವನ್ನು ಸಂಪೂರ್ಣವಾಗಿ ತೊರೆದಂತೆ ಕಾಣುತ್ತದೆ. ತತ್ತ್ವ ನಿರ್ಣಯಕ್ಕೆ ಅಳವಡಿಸಿಕೊಳ್ಳಬಹುದಾದ ಆದರ್ಶನೀಯ ವಿಧಾನ ಗಣಿತಶಾಸ್ತ್ರ ಎಂಬ ಡೆಕಾರ್ಟ್‍ನ ವಾದವನ್ನು ಹುಸ್ರೆಲನೂ ಒಪ್ಪಿಕೊಂಡಂತೆ ತೋರುತ್ತದೆ.

	ಇಲ್ಲಿ ಅಹಂತತ್ತ್ವದ ಬಗ್ಗೆ ಒಂದು ಪ್ರಶ್ನೆಯೇಳುತ್ತದೆ. ಈ ಅಹಂತತ್ತ್ವ ಪ್ರತ್ಯೇಕ ಪ್ರತ್ಯೇಕ ವ್ಯಕ್ತಿಗಳಲ್ಲಿರುವ ಅಹಂತತ್ತ್ವವೇ? ಎಂದರೆ ಅಹಂತತ್ತ್ವವು ಅನೇಕವೇ ಅಥವಾ ಎಲ್ಲ ವ್ಯಕ್ತಿಗಳಲ್ಲೂ ಅಡಗಿರುವ ಚಿದ್ವಸ್ತುಗಳೆಲ್ಲಕ್ಕೂ ಮೂಲವಾದ ಮತ್ತು ಸಾಮಾನ್ಯವಾದ ಒಂದು ಮಹಾನ್ ಅಹಂತತ್ತ್ವವೇ? ಹುಸ್ರೆಲ್ ಈ ಮಹಾನ್ ಅಹಂತತ್ತ್ವವನ್ನೇ ಅಂಗೀಕರಿಸುತ್ತಾನೆ. ಇಲ್ಲಿ ವೇದಾಂತದ ಪರಮಾತ್ಮ ಸಿದ್ಧಾಂತಕ್ಕೆ ಇರುವ ಸಾಮೀಪ್ಯವನ್ನು ಗುರುತಿಸಬಹುದು. ಈ ಕಾರಣದಿಂದ ಹುಸ್ರೆಲ್ ಕೆಲವು ತನ್ನ ಸಿದ್ಧಾಂತವನ್ನು ಆಧಾರಭೂತ ಚಿತ್ಪ್ರಧಾನವಾದ ಎಂದೂ ಕರೆಯುವುದುಂಟು.

	ಫಿನಾಮೆನಾಲಜಿಯ ಮೂಲತತ್ತ್ವಗಳ ವಿಷಯದ ಕಡೆ ಗಮನಹರಿಸಿದಾಗ ಮೂಲತತ್ತ್ವಗಳಲ್ಲಿ ಸಮಗ್ರವಾಗಿ ರಚಿತವಾದ ಒಂದು ವ್ಯವಸ್ಥೆಯುಂಟೇ? ವ್ಯವಸ್ಥೆಯಿದ್ದಲ್ಲಿ ಪ್ಲೇಟೋವಿನ ಭಾವನಾವಾದದಲ್ಲಿನಂತೆ ಅಮೂಲತತ್ತ್ವಗಳಲ್ಲಿ ಅಗ್ರಸ್ಥಾನವನ್ನು ಪಡೆದಿರುವ ಒಂದೇ ಒಂದು ಮೂಲತತ್ತ್ವವಿದೆಯೇ? ಅಥವಾ ಮೂಲತತ್ತ್ವಗಳಲ್ಲಿ ವ್ಯವಸ್ಥೆಯೇ ಇಲ್ಲವೇ? ಮುಂತಾದ ಪ್ರಶ್ನೆಗಳಿಗೆ ಯಾವ ಸ್ಪಷ್ಟ ಉತ್ತರಗಳೂ ಸಿಕ್ಕುವುದಿಲ್ಲ.

	ಮೂಲತತ್ತ್ವಗಳು ಬೇರೆ ಬೇರೆಯಾಗಿ ಇರುವ ವಸ್ತುಗಳ ಸಾರಾಂಶವೆಂದು ಹೇಳುವಾಗ ಈ ಪೃಥಕ್ ವಸ್ತುಗಳ ನಿರ್ಮಾಣದಲ್ಲಿ ಮೂಲತತ್ತ್ವಗಳು ವಹಿಸುವ ಪಾತ್ರವೇನೆಂಬುದನ್ನು ಫಿನಾಮೆನಾಲಜಿ ನಿರ್ದೇಶಿಸಬೇಕು. ಹಾಗೆ ಮಾಡಿದರೆ ಮಾತ್ರ ಫಿನಾಮೆನಾಲಜಿ ಪ್ರತ್ಯಕ್ಷವನ್ನು ಅವಲಂಬಿಸಿರುವ ವಿಜ್ಞಾನಗಳಲ್ಲಿ ಅಧಿಕೃತ ಪಾತ್ರವನ್ನು ವಹಿಸಿದಂತಾಗುತ್ತದೆ. ಹೀಗೆ ಅವು ವಿಜ್ಞಾನದ ಕ್ಷೇತ್ರವನ್ನು ಕಲ್ಪಿಸುವ ವಿಧಾನವನ್ನು ಪ್ರಾದೇಶಿಕ ವ್ಯವಸ್ಥೆ ಎಂದು ಹುಸ್ರೆಲ್ ಕರೆಯುತ್ತಾನೆ. ಈ ವ್ಯವಸ್ಥೆಯಲ್ಲಿ ಅವನು ಭೌತವಿಜ್ಞಾನ, ಪ್ರಾಣಿವಿಜ್ಞಾನ ಮತ್ತು ಆತ್ಮವಿಜ್ಞಾನ ಎಂಬ ಮೂರು ವಿಭಾಗಗಳನ್ನು ಪರಿಗಣಿಸಿ ಅವುಗಳನ್ನು ಪ್ರಾದೇಶಿಕ ತತ್ತ್ವ ನಿರೂಪಣೆಗಳೆಂದು ಹೆಸರಿಸಿದ್ದಾನೆ. ಇದರ ನಿರೂಪಣೆ ಸಮರ್ಪಕವೆನಿಸುವಷ್ಟು ವಿಸ್ತಾರವಾಗಿಲ್ಲ.

	ಒಟ್ಟಿನಲ್ಲಿ ಫಿನಾಮೆನಾಲಜಿಯಲ್ಲಿ ಅಹಂತತ್ತ್ವದ ಸ್ವರೂಪ, ಮೂಲತತ್ತ್ವಗಳ ವ್ಯವಸ್ಥೆ ಮತ್ತು ಅವುಗಳಿಂದ ವೈಜ್ಞಾನಿಕ ಕ್ಷೇತ್ರ ಕಲ್ಪಿತವಾಗುವ ಕ್ರಮ-ಇವು ಇನ್ನೂ ಸಮಗ್ರತೆಯನ್ನು ಪಡೆಯಬೇಕಾಗಿದೆ. ಆದರೂ ಶುದ್ಧವಾದ ಒಂದು ತತ್ತ್ವಪದ್ಧತಿಯನ್ನು ನಿರ್ಮಿಸಬೇಕೆಂಬುದೇ ಫಿನಾಮೆನಾಲಜಿಯ ಪ್ರಧಾನ ಸಂದೇಶ.					    (ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ